ದಾಮೋದರ್ ನದಿ -
ಬಿಹಾರ ರಾಜ್ಯದಲ್ಲಿ ಛೋಟಾ ನಾಗಪುರ ಬೆಟ್ಟಗಳಲ್ಲಿ ಹುಟ್ಟಿ. ಸ್ಥೂಲವಾಗಿ ಆಗ್ನೇಯಾಭಿಮುಖವಾಗಿ 625 ಕಿಮೀ.  ಹರಿದು ಪಶ್ಚಿಮ ಬಂಗಾಲದಲ್ಲಿ ಹೂಗ್ಲಿಯನ್ನು ಸೇರುವ ಒಂದು ನದಿ.  ಇದರ ತಲೆಯ ಬಳಿ ಎರಡು ಕವಲುಗಳಿವೆ.  ಇವುಗಳ ಪೈಕಿ ದಕ್ಷಿಣದ ಕವಲು ಬಿಹಾರದ ಪಲಮೌ ಜಿಲ್ಲೆಯ ತೋರಿ ಪರಗಣದಲ್ಲಿ ಉಗಮಿಸುತ್ತದೆ.  ಇದೇ ನದಿಯ ನಿಜವಾದ ಉಗಮಸ್ಥಳ.  ಉತ್ತರದ ಕವಲು ಘರಿ.  ಇದು ಹeóÁರಿಬಾಗ್ ಜಿಲ್ಲೆಯ ವಾಯುವ್ಯ ಮೂಲೆಯಲ್ಲಿ ಉಗಮಿಸುತ್ತದೆ.  ಈ ಕವಲುಗಳು ಸುಮಾರು 42 ಕಿಮೀ.  ದೂರ ಹರಿದು ಹeóÁರಿಬಾಗ್ ಬಳಿ ಒಂದುಗೂಡುತ್ತದೆ.  ಅನಂತರ ಈ ನದಿ ಹೆಚ್ಚು ಕಡಿಮೆ ಪೂರ್ವದಿಕ್ಕಿಗೆ ಹರಿದು ಆ ಜಿಲ್ಲೆಯನ್ನು ದಾಟುತ್ತದೆ.  ವಾಯುವ್ಯದ ಕಡೆಯಿಂದ ಹರಿದು ಬರುವ ಕೂನೂರ್, ಜಮುನಿಯಾ, ಮುಂತಾದ ನದಿಗಳನ್ನು ಕೂಡಿಕೊಳ್ಳುತ್ತದೆ.  ಮನ್‍ಭೂಮ್ ಜಿಲ್ಲೆಯಲ್ಲಿ ಪೂರ್ವಾಭಿಮುಖವಾಗಿಯೇ ಮುಂದುವರಿಯುತ್ತದೆ.  ಬಂಗಾಲದ ಬದ್ರ್ವಾನ್ ಜಿಲ್ಲೆಯ ಗಡಿಯನ್ನು ಮುಟ್ಟುವ ಎಡೆಯಲ್ಲಿ ಉತ್ತರದಿಂದ ಬಾರಕಾರ್ ನದಿ ಇದನ್ನು ಸೇರುತ್ತದೆ.  ಇದೇ ದಾಮೋದರ್‍ನ ಪ್ರಮುಖ ಉಪನದಿ.  ಸ್ವಲ್ಪ ಮುಂದೆ ಈ ನದಿ ನೌಕಾಯೋಗ್ಯವಾಗಿ ಪರಿಣಮಿಸುತ್ತದೆ.  ಬಾರಕಾರ್ ನದಿಯ ಸಂಗಮದ ಸ್ಥಳದಲ್ಲಿ ನದಿಯ ದಿಕ್ಕು ಆಗ್ನೇಯಕ್ಕೆ ಬದಲಾಗಿ ಅಸನ್ಸೋಲ್ ಮತ್ತು ಬಂಕುರ ಜಿಲ್ಲೆಗಳನ್ನು ಪ್ರತ್ಯೇಕಿಸುತ್ತದೆ.  ಬದ್ರ್ವಾನ್ ಪಟ್ಟಣದಿಂದ ಮುಂದಕ್ಕೆ ಬಲಕ್ಕೆ ತಿರುಗಿ, ಬದ್ರ್ವಾನ್ ಮತ್ತು ಹೂಗ್ಲಿ ಜಿಲ್ಲೆಗಳಲ್ಲಿ ದಕ್ಷಿಣ ದಿಕ್ಕಿಗೆ ಹರಿಯುತ್ತದೆ.  ಹೂಗ್ಲಿ ಜಿಲ್ಲೆಯನ್ನು ಪ್ರವೇಶಿಸುವ ಮುನ್ನ ದಾಮೋದರ ನದಿಯ ಸ್ವರೂಪವೇ ಬದಲಾಗುತ್ತದೆ.  ನದೀಮುಖಜಭೂಮಿಯಂಥ ಪ್ರದೇಶದಲ್ಲಿ ಇದು ಅನೇಕ ಕವಲುಗಳಾಗಿ ಒಡೆಯುತ್ತದೆ.  ದಾಮೋದರ್ ನದಿ ಹುಟ್ಟುವ ಪ್ರದೇಶದಲ್ಲೇ ಉಗಮಿಸುವ ರೂಪನಾರಾಯಣ್ ನದಿಗೆ ಈ ನದಿಯ ನೀರಿನ ಬಹುಭಾಗ ಹರಿದು ಹೋಗುತ್ತದೆ.  ಅಂತಿಮವಾಗಿ ದಾವೋದರ್ ನದಿ ಒಂದು ಸಣ್ಣ ಹೊಳೆಯಾಗಿ ಪರಿಣಮಿಸಿ, ಉಳಿದ ನೀರು ಹಾಗೂ ಮಣ್ಣಿನೊಂದಿಗೆ ಫಾಲ್ಟಾದ ಎದುರಿಗೆ ಕಲ್ಕತ್ತದಿಂದ ಕೆಳಕ್ಕೆ 56 ಕಿಮೀ. ದೂರದಲ್ಲಿ, ಹೂಗ್ಲಿ ನದಿಯನ್ನು ಸೇರುತ್ತದೆ.

	ತನ್ನ ಕೇವಲ 625ಕಿಮೀ.  ಉದ್ದದಲ್ಲಿ ಇದು ಭಾರತೀಯ ನದಿಗಳ ಎರಡು ಮುಖ್ಯ ಲಕ್ಷಣಗಳನ್ನೂ ಪ್ರದರ್ಶಿಸುತ್ತದೆ.  ಮೇಲ್ಭಾಗದಲ್ಲಿ ಈ ನದಿಯ ಹರಿವಿನ ವೇಗ ಅಧಿಕ.  ಅಲ್ಲಿ ಇದು ಅಗಾಧ ಮಣ್ಣನ್ನು ಹೊತ್ತು ತರುತ್ತದೆ.  ದಾಮೋದರ್ ನದಿಯ ತಲೆಯ ಎರಡೂ ಕವಲುಗಳು ಸೇರುವ ಎಡೆಯಲ್ಲಿ ಇದು ಸಮುದ್ರಮಟ್ಟದಿಂದ 442 ಮೀ. ಎತ್ತರದಲ್ಲಿದೆ.  ಮುಂದಿನ ಸುಮಾರು 150 ಕಿಮೀ. ದೂರ ಕ್ರಮಿಸುವ ವೇಳೆಗೆ ಇದು ಸರಾಸರಿಯಲ್ಲಿ ಪ್ರತಿ ಕಿಮೀ.ಗೆ 2 ಮೀ.ಗಳಷ್ಟು ತಗ್ಗಿಗೆ ಇಳಿಯುತ್ತದೆ.  ಉಳಿದ ಸುಮಾರು 400 ಕಿಮೀ. ದೂರದಲ್ಲಿ ಇದು ಕೇವಲ 194 ಮೀ. ಇಳಿಯುತ್ತದೆ.  ಇಲ್ಲಿ ನದಿಯ ವೇಗ ಬಹಳ ಕಡಿಮೆಯಾಗುತ್ತದೆ.

	ದಾಮೋದರ್ ನದಿಯನ್ನು ದುಃಖನದಿ ಎಂದು ಕರೆಯಲಾಗಿದೆ.  ಈ ನದಿಯ ಮೇಲ್ಕಣಿವೆಯ ಭಾಗದಲ್ಲಿ ಬಿಹಾರದ ಹeóÁರಿಬಾಗ್, ಪಲಮೌ, ರಾಂಚಿ, ಮನ್ ಭೂಂ ಮತ್ತು ಸಂತಾಲ್ ಪರಗಣ ಜಿಲ್ಲೆಗಳ ಭಾಗಗಳಿವೆ. ಇಲ್ಲಿ ವಾರ್ಷಿಕ ಮಳೆ ಸುಮಾರು 117.5 ಸೆಂ.ಮೀ.  ಇದು ಬಹುತೇಕ ಮುಂಗಾರಿನ ಕಾಲದಲ್ಲಿ ಬೀಳುತ್ತದೆ.  ನಗ್ನೀಕೃತವಾದ ಬೆಟ್ಟಗಳ ಮೇಲೆ ಸುರಿಯುವ ಮಳೆಯ ನೀರು ರಭಸವಾಗಿ ದಾಮೋದರ್ ನದಿಗೆ ಹರಿದು ಅದರ ಪ್ರವಾಹವನ್ನು ಒಮ್ಮೆಗೇ ಉಬ್ಬಿಸುತ್ತದೆ.  ಇದನ್ನು ತಡೆಯದಿದ್ದರೆ ನೆಲದ ಮಣ್ಣು ಕೊಚ್ಚಿಹೋಗಿ ನದಿಯ ಪಾತ್ರದಲ್ಲಿ ತುಂಬಿ ಪ್ರವಾಹದ ನೀರು ಅಕ್ಕಪಕ್ಕದ ಹೊಲಹಳ್ಳಿಗಳಿಗೆ ನುಗ್ಗಿ ಅಪಾರ ನಷ್ಟವನ್ನುಂಟುಮಾಡುತ್ತದೆ.  12,000 ಚ.ಕಿಮೀ. ಜಲೋತ್ಸಾರಣ  ನೆಲದಿಂದ ಕೂಡಿದ ಈ ನದಿಯ ಅಗಾಧ ಜಲರಾಶಿಯನ್ನು ನಿಯಂತ್ರಿಸಿ ಪ್ರವಾಹದ ಅನಾಹುತವನ್ನು ತಡೆಗಟ್ಟುವುದಲ್ಲದೆ ಇದನ್ನು ಜನೋಪಯುಕ್ತವಾಗಿ ಪರಿವರ್ತಿಸಲು ಈಚೆಗೆ ಕ್ರಮ ಕೈಗೊಳ್ಳಲಾಗಿದೆ.  			(ನೋಡಿ- ದಾಮೋದರ್-ಕಣಿವೆ-ಯೋಜನೆ)
(ಬಿ.ಎ.ಎಸ್.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ